ಪುಂಡರೀಕ
ಪಾತಾಳಲೋಕದಲ್ಲಿರುವ ಸರ್ಪರಾಜರಲ್ಲಿ ಒಬ್ಬ. ಶೇಷರಾಜನ (ಆದಿಶೇಷ) ಆಪ್ತಮಂತ್ರಿಯಂತೆ ಇದ್ದ. ಅರ್ಜುನ ತನ್ನಿಂದ ಹತನಾದಾಗ ಬಭ್ರುವಾಹನ ಪಾತಾಳದವರನ್ನೆಲ್ಲ ಕೊಂದು ಸಂಜೀವಕ ಮಣಿಯನ್ನು ತರುತ್ತೇನೆಂದು ತಾಯಿ ಚಿತ್ರಾಂಗದೆಗೆ ಹೇಳಿದಾಗ ಅವಳು ಅವನನ್ನು ಕುರಿತು " ಮಗನೇ ಯುದ್ಧ ಬೇಡ ; ಅದರಿಂದ ಕಾರ್ಯ ಸಾಧಿಸುವುದಿಲ್ಲ. ನನಗೆ ಪುಂಡರೀಕನೆಂಬ ಸರ್ಪರಾಜನ ಪರಿಚಯವಿದೆ. ಅವನನ್ನು ನೆನೆದುಕೊಂಡರೆ ಸಾಕು ಅವನೇ ಇಲ್ಲಿಗೆ ಬರುತ್ತಾನೆ. ಅವನನ್ನು ಕಳುಹಿಸಿ ಆ ರತ್ನವನ್ನು ತರಿಸುತ್ತೇನೆ. " ಎಂದು ನೆನೆಯಲು ಪುಂಡರೀಕ ಬಂದು ಕೈ ಮುಗಿದು ನೆನೆದ ಕಾರ್ಯವೇನೆಂದು ಕೇಳಲು ' ನೀನು ಅನಂತನ ಹತ್ತಿರ ಹೋಗಿ ನಿನ್ನ ಮಗಳಾದ ಚಿತ್ರಾಂಗದೆಯ ಮಂಗಳಸೂತ್ರವೂ ಓಲೆಗಳೂ ಉಳಿಯಬೇಕಾದರೆ ಸಂಜೀವಕ ಮಣಿಯನ್ನು ಕೊಡು ' ಎಂದು ಹೇಳಿ ಅದನ್ನು ತೆಗೆದುಕೊಂಡು ಬಾ ಎಂದು ಹೇಳಿದಳು. ಆಗ ಅವನು ದುಃಖಿತೆಯಾದ ಉಲೂಪಿಯನ್ನು ಸಮಾಧಾನ ಮಾಡಿ ಆಕೆಯನ್ನು ಕುರಿತು ನಾನು ಹೋಗಿ ಬರುವುದರಲ್ಲಿ ಈ ಪಾರ್ಥನ ದೇಹ ಕೆಡದಂತೆ ಕಚ್ಚಿ ಹೋಗುವೆ-ಎಂದನು. ಆಗ ಬಭ್ರುವಾಹನ ' ಈ ವಿಷಕೇತು ಶೂರನೂ ತರುಣನೂ ವಂಶವರ್ಧನನೂ ಆಗಿದ್ದಾನೆ. ಇವನನ್ನು ಮೊದಲು ಕಚ್ಚಿ ಆಮೇಲೆ ಪಾರ್ಥನ ಶರೀರವನ್ನು ಕಚ್ಚು ' ಎಂದು ಹೇಳಿದನು. ಅದರಂತೆ ಪುಂಡರೀಕ ಇಬ್ಬರ ಶರೀರವನ್ನೂ ಕಚ್ಚಿ ಪಾತಾಳಕ್ಕೆ ಹೋಗಿ ಶೇಷರಾಜನನ್ನು ಭೇಟಿಯಾಗಿ ಅರ್ಜುನ ಗಂಗಾ ಶಾಪದಿಂದಾಗಿ ಮಣಿಪುರದಲ್ಲಿ ಬಭ್ರುವಾಹನನಿಂದ ಮರಣ ಹೊಂದಿದ್ದನ್ನೂ ಸಂಜೀವಕ ಮಣಿಯ ಅಗತ್ಯವನ್ನೂ ಕೇಳಿದ. ಇದಕ್ಕೆ ಶೇಷರಾಜ ಒಪ್ಪಲು ಧೃತರಾಷ್ಟ್ರನೆಂಬ ನಾಗನು ಅಡ್ಡಿಬಂದ. ಆಗ ಶೇಷ ಪುಂಡರೀಕನಿಗೆ ಈ ನಾಗರು ಕೊಡಬಾರದೆಂದದ್ದರಿಂದ ರತ್ನ ಸಿಗಲಾರದೆಂದು ಹೇಳಿ ಕಳುಹಿಸಿದ. ಪುಂಡರೀಕನಿಂದ ಈ ವಿಷಯವನ್ನು ತಿಳಿದ ಬಭ್ರುವಾಹನ ಪಾತಾಳದವರೊಂದಿಗೆ ಯುದ್ಧ ಮಾಡಿ ಗೆದ್ದು ಸಂಜೀವಕ ಮಣಿಯನ್ನು ತಂದು ಅರ್ಜುನ, ವೃಷಕೇತು ಮೊದಲಾದವರೆಲ್ಲರನ್ನೂ ಬದುಕಿಸಿದ. 

	ಪುಂಡರೀಕ ಎಂಬುದು ಅಷ್ಟದಿಗ್ಗಜಗಳಲ್ಲಿ ಒಂದರ ಹೆಸರು. ಇದು ಆಗ್ನೇಯ ದಿಕ್ಕಿನಲ್ಲಿದೆ. 

	ಪುಂಡರೀಕ ಎಂಬುದು ಸಕಲ ಶಾಸ್ತ್ರ ವಿಶಾರದನಾದ ಒಬ್ಬ ಬ್ರಾಹಣನ ಹೆಸರೂ ಹೌದು. ಇವನು ಒಮ್ಮೆ ನಾರಾಯಣನ ಸರ್ವೋತ್ತಮತ್ವ ವಿಷಯವಾಗಿ ನಾರದ ಮುನಿಯ ಸಂಗಡ ವಾದ ಮಾಡಿದ. 

	ಯಮಸಭೆಯ ಕ್ಷತ್ರಿಯನೊಬ್ಬನಿಗೆ ಪುಂಡರೀಕನೆಂಬ ಹೆಸರಿದೆ.					(ಕೆ.ವೈ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ